ದುಗ್ಧರಸ  -
ಲೋಮ ರಕ್ತನಾಳಗಳಿಂದ ಒಸರಿ ನೆರೆಯಲ್ಲಿರುವ ಇತರ ಲೋಮನಾಳಗಳಲ್ಲಿ ಹರಿಯುವ ದ್ರವ (ಲಿಂಫ್). ಲಸೀಕ, ದುಗ್ಥಜಲ, ವಸ, ಅಮೈಕ್ಕರ, ತ್ವಗುವಕಂ ಇವು ಪರ್ಯಾಯ ನಾಮಗಳು. ಮೇಲ್ಮಟ್ಟದ ಪ್ರಾಣಿಗಳಲ್ಲಿ ಗುಂಡಿಗೆಯಿಂದ ಹೊರಟ ರಕ್ತನಾಳಗಳು ಗುಂಡಿಗೆಯನ್ನು ಪುನಃ ಸೇರುವವರೆಗೂ ಎಲ್ಲೂ ತೆರೆದುಕೊಂಡಿರುವುದಿಲ್ಲ. ಇವುಗಳಲ್ಲಿ ಕೇಶಾಲಗಳ ಅಥವಾ ಲೋಮನಾಳಗಳ (ಕ್ಯಾಪಿಲ್ಲರೀಸ್) ಸಂಖ್ಯೆ ಅಮಿತವಾಗಿದೆ. ಲೋಮನಾಳಗಳ ಭಿತ್ತಿಯ ಮೂಲಕ ಪ್ರೋಟೀನ್‍ರಹಿತ ರಕ್ತದ್ರವ ಊತಕ ರಸಕ್ಕೆ (ಟಿಶ್ಯೂಫ್ಲೂಯಿಡ್) ಸೇರುತ್ತವೆ. ಶರೀರದ ಪ್ರತಿಯೊಂದು ಕೋಶವನ್ನೂ ಊತಕರಸ ಆವರಿಸಿರುವುದು. ಈ ತೆರನಾಗಿ ಆಹಾರ ರಕ್ತದಿಂದ ಶರೀರದ ಪ್ರತಿಯೊಂದು ಕೋಶಕ್ಕೂ ಒದಗುತ್ತದೆ. ನೀರೂ ಅದರಲ್ಲಿ ಕರಗಿರುವ ವಸ್ತುಗಳೂ ಲೋಮನಾಳಗಳ ಮಡಿಲುಗಳ ಮೂಲಕ ರಕ್ತದಿಂದ ಊತಕ ರಸಕ್ಕೂ ಆ ರಸದಿಂದ ರಕ್ತಕ್ಕೂ ತಡೆಯಿಲ್ಲದೆ ಸಂಚರಿಸುತ್ತವೆ. ಆದರೆ ಪ್ರೋಟೀನ್ ಬೃಹದಣು ಹೀಗೆ ಸಂಚರಿಸಲಾರದು. ಯಾವುದೇ ಕಾರಣದಿಂದ ಊತಕರಸಕ್ಕೆ ಸೇರಿರಬಹುದಾದ ಪ್ರೋಟೀನ್ ಬೃಹದಣುಗಳನ್ನು ಒಯ್ಯುವುದಕ್ಕೆಂದೇ ವಿಶೇಷ ಲೋಮನಾಳಗಳಿವೆ. ಕೊಂಚ ಊತಕರಸ ಪ್ರೋಟೀನುಗಳ ವಾಹಕವಾಗಿ ಇಂಥ ಲೋಮನಾಳಗಳನ್ನು ಸೇರುತ್ತವೆ. ಇವುಗಳೊಳಗಿನ ದ್ರವವೇ ದುಗ್ಧರಸ. ಈ ನಾಳಗಳು ದುಗ್ಥರಸ ನಾಳಗಳು ಅಥವಾ ವಾಹಿನಿಗಳು. ಒಂದಕ್ಕೊಂದು ಸೇರಿ ದೊಡ್ಡ ದೊಡ್ಡ ನಾಳಗಳಾದರೂ ಈ ವಾಹಿನಿಗಳು ಎಂದೂ ಸಣ್ಣ ರಕ್ತನಾಳಕ್ಕಿಂತ ದಪ್ಪವಾಗಿರುವುದಿಲ್ಲ. ದುಗ್ಧರಸ ಲೋಮನಾಳಗಳ ಅಗ್ರಗಳು ಮುಚ್ಚಿಕೊಂಡೇ ಇರುತ್ತವೆ. ಅಂದರೆ ಅವು ಕುರುಡಾಗಿ ಪ್ರಾರಂಭವಾಗುತ್ತವೆ. ಯಾವ ಅಂಗದೊಳಕ್ಕೂ ತೆರೆದಿರುವುದಿಲ್ಲ.

ದುಗ್ಧವಾಹಿನಿಗೂ ಊತಕ ರಸಕ್ಕೂ ನಡುವೆ ನಿರಂತರವಾದ ತೆಳು ಊತಕರಸ ಲೋಮನಾಳದ ಮದಿಲು ಉಂಟು. ಅತಿ ಸಣ್ಣ ದುಗ್ಥರಸ ಲೋಮನಾಳದ ಮದಿಲೊಂದೇ ಒಂದು ಸಾಲುತೆಳು ಕೋಶಗಳ ಜೋಡಣೆಯಿಂದ ನಿರ್ಮಿತವಾದದ್ದು. ವಾಹಿನಿಗಳು ವಿಶಾಲವಾದಂತೆ ಅವು ಇನ್ನೆರಡು ಪೊರೆಗಳನ್ನು ಪಡೆಯುತ್ತವೆ. ಮಧ್ಯದ ಪೊರೆ ಅನೈಚ್ಛಿಕ ಸ್ನಾಯುವಿನ ತೆಳುಹಾಳೆಯಿಂದಲೂ ಹೊರಗಣ ಪೊರೆ ನಾರೆಳೆಗಳ ತೆಳುಹಾಳೆಯಿಂದಲೂ ಆಗಿರುವುದು. ಕವಾಟಗಳು ಸಮೃದ್ಧಿಯಾಗಿರುತ್ತವೆ. ಒಂದೊಂದು ಕವಾಟವೂ ನೀಳವಾದ ಎರಡು ಕದಗಳ (ಕಸ್ಪ್ಸ್ಸ್) ಜೋಡಣೆಯಿಂದ ನಿರ್ಮಿತವಾಗಿದ್ದು ದುಗ್ಧರಸ ಒಂದೇ ದಿಶೆಯಲ್ಲಿ ಚಲಿಸುವುದಕ್ಕೆ ಸಾಧನವಾಗಿದೆ. ವಾಹಿನಿಗಳೊಳಗೆ ಹೆಚ್ಚು ದುಗ್ಧರಸ ಹರಿಯುತ್ತಿರುವಾಗ ಅವು ಗುಟಿಕ ರೂಪವಾಗಿ ಕಾಣುತ್ತವೆ. ಕಾಲುಗಳು, ಉದರ, ಎಡಗೈ ತಲೆ ಮತ್ತು ಎದೆಯ ಎಡಭಾಗಗಳು ಇವುಗಳ ವಾಹಿನಿಗಳು ಒಟ್ಟುಗೂಡಿ ದುಗ್ಧರಸವನ್ನು ಎದೆಯಲ್ಲಿರುವ ಪ್ರಮುಖ ದುಗ್ಧರಸನಾಳಕ್ಕೆ (ಥsÉೂರಾಸಿಕ್ ಡಕ್ಟ್) ಸುರಿಯುತ್ತವೆ. ಪ್ರಮುಖ ದುಗ್ಧರಸನಾಳ ಕುತ್ತಿಗೆಯ ಎಡಭಾಗದಲ್ಲಿರುವ ಜ್ಯುಗ್ಯುಲರ್ ಅಭಿಧಮನಿ ಎಂಬ ರಕ್ತನಾಳವನ್ನು ಸೇರುವುದರಿಂದ ದುಗ್ಧರಸ ರಕ್ತದೊಡನೆ ಮಿಶ್ರವಾಗುತ್ತದೆ. ಎದೆಯ ಬಲಭಾಗ, ಬಲಗೈ ಮತ್ತು ತಲೆ ಕುತ್ತಿಗೆಗಳ ಬಲಭಾಗಗಳಿಂದ ಬರುವ ದುಗ್ಧರಸ ಪ್ರಮುಖ ದುಗ್ಧರಸನಾಳಕ್ಕಿಂತ ಸ್ವಲ್ಪ ಸಣ್ಣದಾದ ನಾಳದ ಮೂಲಕ ಬಲ ಜ್ಯೂಗುಲರ್ ಅಭಿಧಮನಿಯನ್ನು ಸೇರುತ್ತವೆ. ಎರಡು ನಾಳಗಳಿಂದಲೂ ದಿನ ಒಂದಕ್ಕೆ 0.3 ರಿಂದ 2.8 ಲೀಟರ್‍ಗಳಷ್ಟು ದುಗ್ಧರಸ ರಕ್ತಗತವಾಗುತ್ತದೆ.

ಮಾನವನನ್ನು ಒಳಗೊಂಡ ಸಸ್ತನಿವರ್ಗದಲ್ಲಿ ದುಗ್ಧರಸನಾಳಗಳು ನರ, ಅಸ್ಥಿ ಮಜ್ಜಾ ಮತ್ತು ಗುಲ್ಮದ ತಿರುಳುಗಳನ್ನು (ಸ್ಪ್ಲೆನಿಕ್ ಪಲ್ಪ್) ಹೊರತುಪಡಿಸಿ ಇನ್ನೆಲ್ಲ ಅಂಗ ಮತ್ತು ಊತಕಗಳಲ್ಲಿಯೂ ಇವೆ. ದುಗ್ಧವಾಹಿನಿಗಳು ಅಂಗಾಂಗಗಳಿಂದ ಹೊರಟು ಜ್ಯೂಗುಲರ್ ಅಭಿಧಮನಿಗಳನ್ನು ಸೇರುವ ಮುನ್ನ ಅಥವಾ ಹೆಚ್ಚು ಸಂಖ್ಯೆ ದುಗ್ಧರಸ ಗ್ರಂಥಿಯನ್ನು ಒಳಹೊಕ್ಕೇ ಮುಂದುವರಿಯುತ್ತವೆ. ಕೆಲವು ಮೀನುಗಳ ದುಗ್ಧರಸವಾಹಿನಿಗಳಲ್ಲಿ ರಕ್ತವೂ ದುಗ್ಧರಸವೂ ಮಿಶ್ರಿತವಾಗಿವೆ. ಇವುಗಳಲ್ಲಿ ಕವಾಟಗಳಿಲ್ಲವಾದ್ದರಿಂದ ದುಗ್ಧರಸ ರೇಚಕಗಳು (ಲಿಂಫ್ ಹಾಟ್ರ್ಸ್) ತಮ್ಮ ಸ್ಪಂದನದಿಂದ ದುಗ್ಧವನ್ನು ಮುಂದಕ್ಕೆ ಸಾಗಿಸುತ್ತದೆ. ಉಭಯಚರಿ ಸರೀಸೃಪ ವರ್ಗಗಳಲ್ಲಿ ದುಗ್ಧವು ರಕ್ತಮಿಶ್ರಿತವಾಗದಿದ್ದಾಗ್ಯೂ ದುಗ್ಧರಸ ಹೃದಯ ಉಂಟು.

ದುಗ್ಧರಸದ ರಚನೆ (ಕಾಂಪೊಸಿಷನ್) : ದುಗ್ಧರಸ ಸಾಮಾನ್ಯವಾಗಿ ಸ್ಫಟಿಕದಂತೆ ಸ್ವಚ್ಛವಾಗಿರುತ್ತದೆ. ಇದರಲ್ಲಿ ವರ್ಣರಹಿತ ರಕ್ತಕೋಶಗಳು (ಕಲರ್‍ಲೆಸ್ ಕಾರ್ಪಸಲ್ಸ್) ಲವಣಗಳು ಮತ್ತು ಅಸ್ಥಿರ ಪ್ರಮಾಣದಲ್ಲಿ ಪ್ರೋಟೀನುಗಳೂ ಇದ್ದು ರಸವು ನಾಳಗಳಲ್ಲಿ ತುಂಬಿರುತ್ತದೆ. ದುಗ್ಧರಸದಲ್ಲಿ ವಿಲೀನವಾಗಿರುವ ವಸ್ತುಗಳು ಊತಕ ರಸದಷ್ಟೇ ಪ್ರಮಾಣದಲ್ಲಿ ಇವೆ ಎಂದು ಸರ್ವತ್ರ ಅಂಗೀಕಾರವಿದೆ. ದುಗ್ಧರಸದಲ್ಲಿ ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಕ್ಲೋರೈಡ್, ಬೈಕಾರ್ಬೋನೇಟ್, ಫಾಸ್ಫೇಟ್ ಆಯಾನುಗಳು ಊತಕರಸದಲ್ಲಿರುವಂತೆಯೇ ಇವೆ. ಸಿ. ಕೆ. ಡ್ರಿಂಕರ್ ಮತ್ತು ಅನುಯಾಯಿಗಳು ಪ್ರೋಟೀನಿನÀ ಪ್ರಮಾಣವು ಇವೆರಡು ರಸಗಳಲ್ಲಿ ಒಂದೇ ಸಮ ಇವೆಯೆಂಬುದಕ್ಕೆ ಸಾಕ್ಷ್ಯವನ್ನು ಒದಗಿಸಿದ್ದಾರೆ. ಅಂದರೆ ದುಗ್ಧರಸನಾಳದ ಮದಿಲಿನ ಎರಡೂ ಕಡೆಗಳಲ್ಲಿರುವ ದುಗ್ಧರಸ ಮತ್ತು ಊತಕರಸಗಳಲ್ಲಿ ವ್ಯತ್ಯಾಸವೇ ಇಲ್ಲವೆಂದಾಯ್ತು. ಮೇದಸ್ಸು ಪದಾರ್ಥದ ಆಹಾರವನ್ನು ಸೇವಿಸಿದ ಬಳಿಕ ದುಗ್ಧರಸ ಹಾಲಿನಂತೆ ಬೆಳ್ಳಗಿರುತ್ತದೆ. ಮೇದಸ್ಸು ಜೀರ್ಣವಾದಾಗ ಅದು ಛೇದಿಸಲ್ಪಟ್ಟು ಅತಿಸೂಕ್ಷ್ಮವಾದ ಹನಿಗಳಾಗಿರುವುದೇ ಕಾರಣ. ಚಿಕ್ಕ ಕರುಳಿನ ಈ ದುಗ್ಧವಾಹಿನಿಗಳಿಗೆ ಲ್ಯಾಕ್ವಿಯಲ್ಸ್ ಎಂದು ಹೆಸರು (ಲ್ಯಾಕ್ವಿಯಲ್ ಅಂದರೆ ಕ್ಷೀರವಾಹಿನಿ).

ದುಗ್ಧರಸ ಕೋಶಗಳು : ದುಗ್ಧರಸ ಕೋಶಗಳು ಮಾತ್ರವೇ ದುಗ್ಧರಸದಲ್ಲಿ ಇರಲು ಸಾಧ್ಯ. ದುಗ್ಧರಸ ಗ್ರಂಥಿಗಳನ್ನು ರಸ ಹಾದುಹೋಗುವಾಗ ಇವು ಅದನ್ನು ಸೇರುವುವು. ಯಾವ ಒಂದು ಮುಹೂರ್ತದಲ್ಲಿ ದುಗ್ಧರಸದಲ್ಲಿ ಎಷ್ಟು ಕೋಶಗಳಿರುತ್ತವೆಂದು ಹೇಳಲು ಸಾಧ್ಯವಿಲ್ಲ. ಪ್ರಾರಂಭ ಸ್ಥಳಗಳಲ್ಲಿ 1 ಮಿ.ಲೀ.ಗೆ 300-400 ಕೋಶಗಳು ಮಾತ್ರ ಇರುವುವು. ಪ್ರಮುಖ ದುಗ್ಧರಸನಾಳದಲ್ಲಿ 1 ಮಿ.ಲೀ.ಗೆ 10-20 ಸಾವಿರದವರೆಗೆ ಉಂಟು. ಕೆಲವು ವೇಳೆಗಳಲ್ಲಿ ಇದರ ನಾಲ್ವಡಿಯಷ್ಟು ಇರುವುದಿದೆ. ದುಗ್ಧರಸಗ್ರಂಥಿಗಳನ್ನು ಅದುಮಿದರೂ ಕೋಶಗಳ ಸಂಖ್ಯೆ ಹೆಚ್ಚುತ್ತದೆ. ವ್ಯಾಯಾಮಾನಂತರ ದುಗ್ಧರಸಕೋಶಗಳ ಸಂಖ್ಯೆ ಹೆಚ್ಚಾಗಿವುದು ಇದರಿಂದಲೇ ಎಂದು ನಿಶ್ಚಯವಾಗಿ ಹೇಳಬಹುದು. ದುಗ್ಧರಸದಲ್ಲಿ ಕೆಂಪು ರಕ್ತ ಕಣಗಳು ಇರುವುದು ಬಲು ಅಪರೂಪ. 

ದುಗ್ಧ ರಸೋತ್ಪಾದನೆಯ ರೀತಿ : ದುಗ್ಧರಸಲೋಮನಾಳದ ಭಿತ್ತಿಕೋಶಗಳ ಸ್ವಸಾಮಥ್ರ್ಯದಿಂದಲೇ ದುಗ್ಧರಸ ಉದ್ಭವಿಸುವುದೆಂದು ಅಭಿಪ್ರಾಯವಿತ್ತು. ಇದಕ್ಕೆ ದುಗ್ಧರಸ ಪ್ರಚೋದಕ (ಸೆಕ್ರಿಟೋಗೋಗ್ಸ್) ಪದಾರ್ಥಗಳೇ ಮುಖ್ಯವಾದ ಸಾಧನವೆಂದಿತ್ತು. ಈಚೆಗೆ ಈ ಅಭಿಪ್ರಾಯವನ್ನು ಕೈಬಿಡಲಾಗಿದೆ. ಲೋಮನಾಳಗಳಿಂದ ನೀರೂ ರಕ್ತದಲ್ಲಿ ವಿಲೀನವಾಗಿರುವ ಪದಾರ್ಥಗಳೂ ಊತಕಾವಕಾಶಕ್ಕೆ (ಟಿಶ್ಯೂ ಸ್ಪೇಸ್) ಹೋಗಲು ಮೂರು ಮುಖ್ಯ ಕಾರಣಗಳಿವೆ. ರಕ್ತದ ಒತ್ತಡ, ವಿಸರಣ (ಡಿಫ್ಯೂಷನ್), ಪರಾಸರಣ (ಆಸ್ಮಾಸಿಸ್).

ಲೋಮನಾಳಗಳ ರಕ್ತದ ಒತ್ತಡ ಪರಾಸರಣ ಒತ್ತಡಕ್ಕಿಂತ ಹೆಚ್ಚಾಗಿದ್ದು ಲೋಮನಾಳಗಳ ನೆರೆಯಲ್ಲಿ ಒಟ್ಟು ಒತ್ತಡ ಕಡಿಮೆಯಾಗಿರುವುದರಿಂದ ನೀರು ಮತ್ತು ಕರಗಿರುವ ಪದಾರ್ಥಗಳು ಪರಾಸರಣ ತತ್ತ್ವಗಳಿಗೆ ಅನುಸಾರವಾಗಿ ಲೋಮನಾಳಗಳಿಂದ ಹೊರಬಂದು ಊತಕರಸವಾಗುತ್ತವೆ. ಇದರಿಂದ ಪೋಷಕ ಪದಾರ್ಥಗಳು ಕೋಶಗಳಿಗೆ ಸೇರುತ್ತವೆ. ಸತತ ಉತ್ಪತ್ತಿಯಾಗುತ್ತಿರುವ ಊತಕ ರಸ ನಿರಂತರವಾಗಿ ಪುನಃ ಲೋಮನಾಳಕ್ಕೆ ಹೀರಿಕೊಳ್ಳಲ್ಪಡುತ್ತದೆ. ಹೀಗಾಗಿ ಊತಕಾವಕಾಶದಲ್ಲಿ ಊತಕರಸ ಸಂಗ್ರಹವಾಗುವುದಿಲ್ಲ. ಹಾಗೆ ಯಾವುದೇ ಕಾರಣದಿಂದ ಸಂಗ್ರಹವಾದರೆ ಶೋಭೆ (ಎಡೀಮ) ಪ್ರಾಪ್ತವಾಗುತ್ತದೆ. ಊತಕರಸ ಪುನಃ ಲೋಮನಾಳದೊಳಕ್ಕೆ ಹೀರಲ್ಪಡುವುದು ಹೀಗೆ. ಲೋಮನಾಳದ ಅಂತ್ಯ ಭಾಗದಲ್ಲಿ ಒತ್ತಡ ಪರಾಸರಣ ಒತ್ತಡಕ್ಕಿಂತ ಕಡಿಮೆ. ಇದರ ನಿವ್ವಳ ಪರಿಣಾಮವಾಗಿ ಪರಾಸರಣ ಒತ್ತಡದ ಪ್ರಭಾವವೇ ವ್ಯಕ್ತವಾಗುವುದು. ಹೀಗೆ ವ್ಯಕ್ತವಾಗುವ ಪರಾಸರಣ ಒತ್ತಡದಿಂದ ಲೋಮನಾಳದ ಒಳಗಿರುವ ರಕ್ತ ಲೋಮನಾಳದ ಹೊರಗಿನಿಂದ ನೀರು ಮತ್ತು ನೀರಿನಲ್ಲಿ ಕರಗಿರುವ ವಸ್ತುಗಳನ್ನೂ ಲೋಮನಾಳದ ಭಿತ್ತಿಯಮೂಲಕ ಹೀರಿಕೊಳ್ಳುತ್ತದೆ. ಈ ವಿಧಿಗಳು ವಾಸ್ತವವಾಗಿ ನಡೆಯುವುವೆಂಬುದನ್ನು ಸ್ಟಾರ್ಲಿಂಗ್ ಮತ್ತು ಲ್ಯಾಂಡಿಸ್ ಎಂಬ ಇಬ್ಬರು ವಿಜ್ಞಾನಿಗಳು ಪ್ರಾಣಿಗಳ ಮೇಲಿನ ಪ್ರಯೋಗಗಳ ಮೂಲಕ ದೃಢ ಪಡಿಸಿದ್ದಾರೆ. 

ಯಾವುದೇ ಅಂಗದಲ್ಲಿ ಅದರ ಕ್ರಿಯೆಗಳ ಚಟುವಟಿಕೆ ಹೆಚ್ಚಿದರೆ ಆ ಸಂದರ್ಭದಲ್ಲಿ ಊತಕರಸದ ಉತ್ಪತ್ತಿಯೂ ಹೆಚ್ಚುತ್ತದೆ. ಹೀಗೆ ಅಧಿಕವಾಗಿ ಉತ್ಪನ್ನವಾದ ಊತಕರಸದಲ್ಲಿ ಪ್ರೋಟೀನುಗಳೂ ಸೇರಿರುವ ಸಾಧ್ಯತೆ ಉಂಟು. ಅಂಗದ ಕ್ರಿಯಾಧಿಕ್ಯದಿಂದಲೂ ಪ್ರೊಟೀನುಗಳ ಉತ್ಪನ್ನವಾಗಿ ಅದು ಕೋಶಗಳಿಂದ ಹೊರಬಂದು ಊತಕರಸದೊಡನೆ ಮಿಶ್ರವಾಗಬಹುದು. ಇಂಥ ಸಂದರ್ಭಗಳಲ್ಲಿ ಶೋಭೆ ಕಂಡು ಬರುವ ಸಾಧ್ಯತೆ ಇದ್ದರೂ ಹಾಗಾಗುವುದಿಲ್ಲ. ಏಕೆಂದರೆ ಅಧಿಕವಾಗಿ ಉದ್ಭವಿಸಿದ ಊತಕರಸ ದುಗ್ಧರಸಲೋಮನಾಳಗಳನ್ನು ಸೇರಿ ದುಗ್ಧರಸ ಎನ್ನಿಸಿಕೊಂಡು ಅವುಗಳ ಮೂಲಕ ಒಯ್ಯಲ್ಪಡುತ್ತದೆ. ಊತಕರಸದಲ್ಲಿರುವ ಪ್ರೋಟೀನು ಈ ರಸ ಲೋಮನಾಳದೊಳಕ್ಕೆ ಹೀರಲ್ಪಡಲು ಸ್ವಲ್ಪಮಟ್ಟಿಗೆ ಅಡ್ಡಿಮಾಡುವುದರಿಂದ ಹೆಚ್ಚುವರಿ ರಸ ದುಗ್ಧರಸನಾಳಗಳನ್ನು ಸೇರಲು ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಪೋಷಕಪದಾರ್ಥಗಳನ್ನು ತಂದ ರಕ್ತದಿಂದ ಹರಿದ ಊತಕರಸ ಊತಕಾವಕಾಶವನ್ನು ಸೇರಿ ಶರೀರಕೋಶಗಳಿಗೆ ಆಹಾರವನ್ನು ಒದಗಿಸಿ ಅಲ್ಲಿ ಉತ್ಪತ್ತಿಯಾದ ಉಪಯುಕ್ತ ಹಾಗೂ ಅನುಪಯುಕ್ತ ಪದಾರ್ಥಗಳನ್ನು ಪಡೆದುಕೊಳ್ಳುತ್ತವೆ. ಈ ರಸ ಪುನಃ ರಕ್ತವನ್ನು ಸೇರಲು ಎರಡು ದಾರಿಗಳಿವೆ. ಒಂದು ಲೋಮನಾಳಗಳ ಅಂತ್ಯಭಾಗದ ಮೂಲಕ ; ಎರಡು ದುಗ್ಧರಸನಾಳಗಳ ಮೂಲಕ. ಶರೀರದ ಕೋಶಗಳಿಗೆ ಆಹಾರ ಸರಬರಾಜು ಮಾಡುವುದೂ ಅಲ್ಲಿ ಉದ್ಭವಿಸುವ ಪದಾರ್ಥಗಳನ್ನು ರಕ್ತಕ್ಕೆ ಒಯ್ಯುವುದೂ ದುಗ್ಧರಸಗಳ ಊತಕರಸ ಮುಖ್ಯ ಕೆಲಸ.

ದುಗ್ಧ ರಸದ ಚಲನೆ: ರಕ್ತಕ್ಕೆ ಪರಿಚಲನ ಸಂಯಂತ್ರ ಉಂಟು. ದುಗ್ಧರಸಕ್ಕಾದರೋ ಇಂಥ ಸಂಯಂತ್ರ ಇಲ್ಲ. ಸ್ನಾಯುಗಳ ಸಂಕೋಚನ ವ್ಯಾಕೋಚನ ದುಗ್ಧರಸವನ್ನು ನಾಳಗಳಲ್ಲಿ ಮುಂದಕ್ಕೆ ತಳ್ಳುತ್ತದೆ, ಅಷ್ಟೆ.. ಈ ನಾಳಗಳಲ್ಲಿ ಅಲ್ಲಲ್ಲಿ ಕವಾಟಗಳಿವೆ. ಇವು ದುಗ್ಧರಸವನ್ನು ಗುಂಡಿಗೆಗೆ ಅಭಿಮುಖವಾಗಿ ಅಲ್ಲದೆ ಎದುರು ದಿಕ್ಕಿನಲ್ಲಿ ಹರಿಯಲು ಆಸ್ಪದ ಕೊಡುವುದಿಲ್ಲ. ದುಗ್ಧರಸ ಚಲನೆಗೆ ಇದೇ ಮುಖ್ಯ ಸಾಧನ. ಯಕೃತ್ತು ಮತ್ತು ಜೀರ್ಣಕಾರಿ ಅಂಗಗಳಲ್ಲಿ ದುಗ್ಧರಸದ ಚಲನೆ ಸಾದಾ ಕ್ರಿಯಶೀಲವಾಗಿರುವುದು. ಮೇಲೆ ವಿವರಿಸುವÀಂತೆ ಪ್ರಮುಖ ದುಗ್ಧನಾಳದ ಮೂಲಕ ಇಲ್ಲಿನ ದುಗ್ಧರಸವೆಲ್ಲವೂ ಕುತ್ತಿಗೆಯ ಬುಡದಲ್ಲಿರುವ ಎಡ ಜ್ಯೂಗ್ಯುಲರ್ ಅಭಿದಮನಿಗೆ ಸುರಿಯುತ್ತದೆ. ಈ ಕಾರ್ಯ ವಪೆಯ ಸಂಕೋಚನ-ವ್ಯಾಕೋಚನದಿಂದಲೂ ಮಹಾಪಧಮನಿಗೆ (ಆಯೋರ್ಟಾ) ಸ್ಪಂದನದಿಂದಲೂ ಕಾರ್ಯಗತವಾಗುವುದು. ಹೀಗೆ ದುಗ್ಧರಸ ದುಗ್ಧರಸನಾಳಗಳನ್ನು ಹೊಕ್ಕಾಗ್ಯೂ ಕೊನೆಗೆ ಅಭಿದಮನಿಯನ್ನು ಸೇರುತ್ತದೆ. ದುಗ್ಧರಸನಾಳಗಳ ಮಾರ್ಗದಲ್ಲಿ ಅಲ್ಲಲ್ಲಿ ದುಗ್ಧಗ್ರಂಥಿಗಳಿವೆ. ದುಗ್ಧರಸನಾಳಗಳು ಇವನ್ನು ಸೇರಿ, ಹೊಸ ನಾಳಗಳು ಉದ್ಭವವಾಗಿ ಕುತ್ತಿಗೆಯ ಅಭಿಧಮನಿಯನ್ನು ಸೇರಲು ಮುಂದುವರಿಯುವವು. ಈ ಗ್ರಂಥಿಗಳು ಆಹಾರ ಪಚನಕಾರ್ಯದಲ್ಲಿ ಸಹಾಯಮಾಡುವುದಿಲ್ಲ. ಇವುಗಳಲ್ಲಿ ದುಗ್ಧರಸಕಣಗಳು ಉದ್ಭವವಾಗಿ ರಕ್ತಕ್ಕೆ ಸೇರಿಕೊಂಡು ರಕ್ತದ ವರ್ಣರಹಿತ ಕಣಗಳು ಒಂದು ಬಗೆಯಾಗುತ್ತವೆ. ಈ ಗ್ರಂಥಿಗಳ ಇನ್ನೊಂದು ಮುಖ್ಯ ಕಾರ್ಯವೆಂದರೆ ಇವು ಅಲ್ಲಲ್ಲಿ ಶರೀರವನ್ನು ಹೋಗುವ ವಿಷಾಣುಗಳನ್ನೂ ಅವು ನಿರ್ಮಿಸುವ ವಿಷ ಪದಾರ್ಥಗಳನ್ನೂ ತಡೆಗಟ್ಟಿ ಅವು ಶರೀರಕ್ಕೆ ಅಪಾಯಕಾರಿಗಳಾಗದಂತೆ ಕಾಪಾಡುತ್ತವೆ.		(ಕೆ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ